ಈಮಿನೆಸ್ಕು, ಮಿಹಇಲ್	
1850-1889. ರುಮೇನಿಯಾದ ಕವಿ. ಮೂವತ್ತಮೂರನೆಯ ಮಯಸ್ಸಿನಲ್ಲಿ ಕೃತಿರಚನೆಯನ್ನು ನಿಲ್ಲಿಸಿದರೂ ರುಮೇನಿಯಾದ ಮತ್ತು ಯೂರೋಪಿನ ಸಾಹಿತ್ಯ ಚರಿತ್ರೆಯಲ್ಲಿ ಹಿರಿಯ ಸ್ಥಾನ ಗಳಿಸಿಕೊಂಡಿದ್ದಾನೆ. ಇನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಇವನ ಕೆಲವು ಕವನಗಳು ಅಚ್ಚಾದುವು (1865). ಹದಿನಾರನೆಯ ವಯಸ್ಸಿನಲ್ಲಿ ಓಡಿಹೋಗಿ, ಸಂಚಾರಿ ನಾಟಕ ಸಂಘವೊಂದನ್ನು ಸೇರಿದ. 1969ರಲ್ಲಿ ವಿಯೆನ್ನ ವಿಶ್ವವಿದ್ಯಾನಿಲಯಕ್ಕೆ ಹೋದ. ಆದರೆ ಪದವೀಧರನಾಗಲಿಲ್ಲ. ಕೆಲವು ಕಾಲ ಪುಸ್ತಕಭಂಡಾರವೊಂದರಲ್ಲಿ ಕೆಲಸಮಾಡಿದ. 1877 ರಿಂದ 83ರವರೆಗೆ ಪತ್ರಿಕಾ ಸಂಪಾದಕನಾಗಿದ್ದ. 1883ರಲ್ಲಿ ಹುಚ್ಚಿನ ಸೋಂಕು ತಲೆದೋರಿ, ಮತ್ತೆ ಮತ್ತೆ ಹುಚ್ಚಿನಿಂದ ನರಳಿ ಸತ್ತ.

ಈತ 1866ರಲ್ಲಿ ಪ್ರಾರಂಭವಾದ ಯೌವನ ಪಂಥಕ್ಕೆ ಸೇರಿದವ. ತೀವ್ರ ಸಂವೇದನೆ ಮತ್ತು ಜೀವನದ ಕಷ್ಟನಿಷ್ಠುರಗಳನ್ನು ಎದುರಿಸಲಾರದ ಚಿತ್ತದೌರ್ಬಲ್ಯ—ಇವು ಈಮಿನೆಸ್ಕುವಿನ ಜೀವನದ ಗತಿಯನ್ನೂ ಬರಹಗಳಲ್ಲಿ ಪ್ರತಿಬಿಂಬಿತವಾಗುವ ಮನೋಧರ್ಮವನ್ನು ರೂಪಿಸಿದುವು. ರೊಮ್ಯಾಂಟಿಕ್ ಕನಸುಗಾರ, ನಿರಾಶಾವಾದಿ. ಸಂಸ್ಕøತಿ ಮತ್ತು ವೈಚಾರಿಕತೆಗಳನ್ನು ಪಡೆದವ. ಸುಮಾರು 18 ಮರ್ಷಗಳಲ್ಲಿ 60 ಕವನಗಳು. ಎರಡು ತಾತ್ತ್ವಿಕ ಕಥೆಗಳು, ಒಂದು ಕಾದಂಬರಿ, ಕಿನ್ನರಿಯರ ಕಥೆಗಳು—ಇಷ್ಟನ್ನು ರಚಿಸಿದ. ಹಲವು ಲೇಖನಗಳನ್ನು ಬರೆದ. ಹುಚ್ಚು ಸೋಂಕಿದ ಬಳಿಕವೂ ತಿಳಿವಿನ ದಿನಗಳಲ್ಲಿ ಸಂಸ್ಕøತವನ್ನು ಅಭ್ಯಾಸಮಾಡಿ, ಸಂಸ್ಕøತ ವ್ಯಾಕರಣ ಒಂದನ್ನು ಸಿದ್ಧಗೊಳಿಸಿದ. 

ಅದ್ವಿತೀಯ ಮಾಧುರ್ಯ ಉಳ್ಳ ಶೈಲಿಯಲ್ಲಿ ಮಾನವೀಯತೆ ಮತ್ತು ವೈಚಾರಿ ಕತೆಗಳು ಬೆರೆತ ಅದ್ಭುತವಾದ ಭಾವಗೀತೆಗಳನ್ನು ರಚಿಸಿದ. ಮಾರ್ನಿಂಗ್ ಸ್ಟಾರ್ ಇವನ ಅತ್ಯುತ್ತಮ ಕೃತಿ; ಇದರಲ್ಲಿ ಸ್ವರ್ಗದ ಚೇತನವೊಂದು ಮಾನವರೂಪತಾಳಿ ಮನುಷ್ಯಹೃದಯದ ಪ್ರೇಮವನ್ನರಿಯಲು ಪ್ರಯತ್ನಿಸಿ ವಿಫಲವಾಗುವ ಜನಪ್ರಿಯ ಕಥೆಯೊಂದನ್ನು ಬಳಸಿಕೊಂಡು, ಕವಿ ಪ್ರತಿಭಾವಂತ ಸಹಮಾನವರಿಗೆ ತನ್ನ ಭಾವನೆಗಳನ್ನು ತಿಳಿಸಲು ಪ್ರಯತ್ನಿಸಿ ವಿಫಲನಾಗುವ ಅನುಭವವನ್ನು ನಿರೂಪಿಸಿದ್ದಾನೆ. ಅತಿಸೂಕ್ಷ್ಮ ಸ್ವಭಾವದ ವಿಷಾದ ಇವನ ಸಾಹಿತ್ಯವನ್ನೆಲ್ಲ ಆವರಿಸಿದೆ. ಯೂರೋಪಿನಲ್ಲಿನ ರೊಮ್ಯಾಂಟಿಕ್ ಯುಗದ ಕಡೆಯ ಮಜಲಿನ ಕವಿ, ಈತ. ಇಂಗ್ಲಿಷ್, ಜರ್ಮನ್, ಫ್ರೆಂಚ್ ಮತ್ತು ಇಟಾಲಿಯನ್ ಭಾಷೆಗಳಿಗೆ ಇವನ ಕೃತಿಗಳು ಭಾಷಾಂತರವಾಗಿವೆ.

(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ